1943_. ಪೋಲೆಂಡಿನ ಅಧ್ಯಕ್ಷ, ಕಾರ್ಮಿಕ ನಾಯಕ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕøತ. ಈತ 1943 ಸೆಪ್ಟಂಬರ್ 29ರಂದು ಪೊಪಾದಲ್ಲಿ ಜನಿಸಿದ. ಈತ ಕಾರು ದುರಸ್ತಿಗೊಳಿಸುವ ಉದ್ಯೋಗದೊಡನೆ ತನ್ನ ಬದುಕನ್ನು ಆರಂಭಿಸಿದ. ಸೈನ್ಯದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ, ಅನಂತರ ಹಡಗು ನಿರ್ಮಾಣ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ. 1969ರಲ್ಲಿ ವಿವಾಹಿತನಾದ ಈತ ಎಂಟು ಮಕ್ಕಳ ತಂದೆ.

1970ರಲ್ಲಿ ಅಂದಿನ ಸರ್ಕಾರ ಹಾಗೂ ಹಡಗು ನಿರ್ಮಾಣ ಕಾರ್ಮಿಕರ ನಡುವಣ ಸಂಘರ್ಷದ ಹಿನ್ನೆಲೆಯಲ್ಲಿ ಈತ ಉದ್ಯೋಗ ಕಳೆದುಕೊಂಡ. 1978ರಲ್ಲಿ ಕಮ್ಯೂನಿಸ್ಟೇತರ ಕಾರ್ಮಿಕ ಸಂಘಟನೆಗಳನ್ನು ಬಲಪಡಿಸಿ, ಕಾರ್ಮಿಕ ನಾಯಕನಾದ. 1980ರಲ್ಲಿ ಡಾನ್ಸಕ್ ಹಡಗು ನಿರ್ಮಾಣ ಘಟಕದ ಕಾರ್ಮಿಕರ ಮುಷ್ಕರದ ಮುಂದಾಳತ್ವವನ್ನು ವಹಿಸಿ, ಕಾರ್ಮಿಕರಿಗೆ ಜಯತಂದುಕೊಟ್ಟ; ಈತನನ್ನು 1981ರಲ್ಲಿ ವ್ಯಾಟಿಕನ್‍ನ ಪೋಪ್ ಜಾನ್‍ಪಾಲ್ ಅವರೇ ಸ್ವತಃ ಸ್ವಾಗತಿಸಿದರು. ಅದೇ ವರ್ಷ ಈತ ಕಾರ್ಮಿಕ ಸಂಘಟನೆ ಸಾಲಿಡಾರಿಟಿಯ ಮುಖ್ಯಸ್ಥನಾಗಿ ಆಯ್ಕೆಯಾದ. ವಿಶ್ವ ಕಾರ್ಮಿಕ ಸಂಸ್ಥೆಯ ಆಹ್ವಾನದ ಮೇರೆಗೆ ಇಟಲಿ, ಜಪಾನ್, ಸ್ವೀಡನ್, ಫ್ರಾನ್ಸ್ ಮತ್ತು ಸ್ವಿಟ್ಜರ್‍ಲೆಂಡ್ ಪ್ರವಾಸ ಕೈಗೊಂಡು, ಕಾರ್ಮಿಕ ರಂಗದಲ್ಲಿ ಉನ್ನತ ಸ್ಥಾನಕ್ಕೇರಿದ. 1981ರಲ್ಲಿ ಅಂದಿನ ಸರ್ವಾಧಿಕಾರಿ ಜಾರುಜೆಲ್‍ಸ್ಕಿ ಇವನನ್ನು ಗೃಹ ಬಂಧನದಲ್ಲಿರಿಸಿದ. ಅನಂತರ ತನ್ನ ಸ್ಥಾನವನ್ನು ಮರಳಿ ಪಡೆದ. 

ಆರ್ಥಿಕ ರಂಗದ ಪರಿಸ್ಥಿತಿ ಹದಗೆಡುತ್ತಿದ್ದಂತೆ ಜನತೆಯ ಅಸಮಾಧಾನ, ಅತೃಪ್ತಿಗಳು ಪೋಲೆಂಡ್‍ನಲ್ಲಿ ಹೆಚ್ಚುತ್ತಾ ಹೋದಂತೆ ಚುನಾವಣೆ ನಡೆದು ಕಮ್ಯೂನಿಸ್ಟೇತರ ಸರ್ಕಾರ ಅಧಿಕಾರಕ್ಕೆ ಬಂತು. ಪ್ರಪಂಚದ ಪ್ರಮುಖ ಮುಖಂಡರೊಡನೆ ಮಾತುಕತೆ ನಡೆಸುತ್ತ ಬಂದ ಈತ 1990ರ ಚುನಾವಣೆಯಲ್ಲಿ ಗೆದ್ದು ಅನಂತರ ಪೋಲೆಂಡ್‍ನ ಅಧ್ಯಕ್ಷನಾದ. 1995ರಲ್ಲಿ ಪರಾಭವಗೊಂಡ. ಅಲೈಯನ್ ಕಾಲೇಜ್, ಪ್ಯಾರಿಸ್ (1981), ಕೊಲಂಬಿಯ ವಿಶ್ವವಿದ್ಯಾಲಯ (1981), ನೊಟ್ರೆಡಾಮ್ (1982), ಪ್ಯಾರಿಸ್ ವಿಶ್ವವಿದ್ಯಾಲಯ (1983), ಹಾರ್ವರ್ಡ್ ವಿಶ್ವವಿದ್ಯಾಲಯ (1983), ಸೈಮನ್ ಫೆಜರ್ ವಿಶ್ವವಿದ್ಯಾಲಯ (1984), ಮಿಜಿ ವಿಶ್ವವಿದ್ಯಾಲಯ (1997), ನಾರ್ತ್ ಕರೋಟಿನ್ (2002) ಮೊದಲಾದ ಶಿಕ್ಷಣ ಸಂಸ್ಥೆಗಳು ಇವನಿಗೆ ಗೌರವ ಡಾಕ್ಟೊರೇಟ್ ಪದವಿ ನೀಡಿ ಗೌರವಿಸಿವೆ. ಪ್ರಪಂಚದ ಪ್ರಸಿದ್ಧ ನಾಯಕರಲ್ಲಿ ಒಬ್ಬನಾದ ಈತ ಅನೇಕ ರಾಷ್ಟ್ರಗಳಿಂದ ಪ್ರತಿಷ್ಠಿತ ಪ್ರಶಸ್ತಿ ಗೌರವಗಳನ್ನು ಪಡೆದ. 1983ರಲ್ಲಿ ಇವನಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಈತ ಸ್ಥಾಪಿಸಿದ (1995) ಲೇಕ್ ವಾಲೆಷಾ ಪ್ರತಿಷ್ಠಾನ ಪೋಲೆಂಡಿನ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳು, ಸ್ವಾತಂತ್ರ್ಯ ಮತ್ತು ಒಗ್ಗಟ್ಟುಗಳನ್ನು ಸಾರ್ವಜನಿಕ ಹಾಗೂ ಪ್ರಪಂಚ ಮಟ್ಟದಲ್ಲಿ ಎತ್ತಿಹಿಡಿಯುವ ಧ್ಯೇಯವುಳ್ಳದ್ದು.	

(ಎಮ್.ಎಚ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ